Wednesday, July 24, 2024

ಹೆಂಡತಿ ಅಸುನೀಗಿದ ಬೆನ್ನಲ್ಲೇ ಆಸ್ಪತ್ರೆಯಲ್ಲೇ ಶೂಟ್​ ಮಾಡಿಕೊಂಡ IPS ಅಧಿಕಾರಿ

ಅಸ್ಸಾಂ: ತನ್ನ ಹೆಂಡತಿ ಸಾವನ್ನಪ್ಪಿದ ಕೆಲವೇ ಕ್ಷಣದಲ್ಲಿ ಐಪಿಎಸ್ ಅಧಿಕಾರಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುವಾಹಟಿ ನಗರದಲ್ಲಿರುವ ನೆಮ್‌ಕೇರ್ ಎನ್ನುವ ಖಾಸಗಿ ಆಸ್ಪತ್ರೆಯಲ್ಲಿ ಪತ್ನಿ ಕ್ಯಾನ್ಸರ್‍ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಜೀವನ್ಮರಣ ಹೋರಾಟ ಅಂತ್ಯಗೊಳಿಸಿ ಅಸುನೀಗಿದ್ದಾರೆ. ತಕ್ಷಣವೇ ಮನನೊಂದ ಪತಿಯೂ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರಸ್ತುತ ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಹಾಗೂ 2009ರ ಬ್ಯಾಚ್‌ನ ಡಿಐಜಿ ಶ್ರೇಣಿಯ ಐಪಿಎಸ್ ಅಧಿಕಾರಿ ಶಿಲಾದಿತ್ಯ ಚೇಟಿಯಾ (44) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತ್ನಿ ಆಗಮೊನೀ ಬಾರ್ಬರುವಾ ಕಳೆದ 2 ವರ್ಷಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು.

ಹೀಗಾಗಿ ಇವರನ್ನು ನೆಮ್‌ಕೇರ್ ಖಾಸಗಿ ಆಸ್ಪತ್ರೆಗೆ ಎರಡು ತಿಂಗಳು ಹಿಂದೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಪತ್ನಿ ಅನಾರೋಗ್ಯ ಹಿನ್ನೆಲೆಯಲ್ಲಿ ಸರ್ಕಾರದ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ 4 ತಿಂಗಳಿನಿಂದ ರಜೆಯಲ್ಲಿದ್ದರು.

ಪತ್ನಿಯನ್ನು ಆಸ್ಪತ್ರೆಯ ಐಸಿಯುನಲ್ಲಿ ದಾಖಲು ಮಾಡಿದ ಮೇಲೆ 2 ತಿಂಗಳುಗಳಿಂದ ಆಸ್ಪತ್ರೆಯಲ್ಲಿ ತಂಗಿದ್ದರು. ಇದಕ್ಕಾಗಿ ಅನುಮತಿ ಪಡೆದುಕೊಂಡು ಪ್ರತ್ಯೇಕ ರೂಮ್​ ತೆಗೆದುಕೊಂಡಿದ್ದರು. ಕಳೆದ 3 ದಿನಗಳಿಂದ ಅವರ ಪತ್ನಿಯ ಸ್ಥಿತಿ ಚಿಂತಾಜನಕವಾಗಿತ್ತು. ಅದರಂತೆ ಅವರು ಆಸ್ಪತ್ರೆಯ ಐಸಿಯುನಲ್ಲಿ ಸಂಜೆ ಸಾವನ್ನಪ್ಪಿದ್ದಾರೆ. ಈ ಮಾಹಿತಿಯನ್ನು ಅಲ್ಲೇ ಇದ್ದ ಗಂಡನಿಗೆ ವೈದ್ಯರು ತಿಳಿಸಿದ್ದಾರೆ.

ಐಸಿಯುನಲ್ಲಿದ್ದ ಮೃತ ಪತ್ನಿ ಬಳಿಗೆ ತಕ್ಷಣ ಗಾಬರಿಯಿಂದ ಓಡೋಡಿ ಬಂದು ದುಃಖಿತರಾಗಿದ್ದಾರೆ. ಬಳಿಕ ನಾನು ಪ್ರಾರ್ಥನೆ ಮಾಡಬೇಕೆಂದು ಹೇಳಿ ಐಸಿಯುನಲ್ಲಿದ್ದ ಡಾಕ್ಟರ್ಸ್, ನರ್ಸ್​ಗಳನ್ನ ಹೊರಗೆ ಕಳುಹಿಸಿದ್ದಾರೆ. ಇದಾದ 10 ನಿಮಿಷದ ಬಳಿಕ ತಮ್ಮಲ್ಲಿದ್ದ ಸರ್ಕಾರದ ಗನ್​​ನಿಂದ ತಲೆಗೆ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸೌಂಡ್ ಕೇಳುತ್ತಿದ್ದಂತೆ ಅಸ್ಪತ್ರೆಯ ಸಿಬ್ಬಂದಿ, ಡಾಕ್ಟರ್ಸ್​ ಎಲ್ಲ ಓಡೋಡಿ ಬಂದು ಏನಾಯಿತು ಎಂದು ನೋಡಿದ್ದಾರೆ. ಆದ್ರೆ ಪತ್ನಿ ಪಕ್ಕದಲ್ಲೇ ಗಂಡ ಶವವಾಗಿ ಬಿದ್ದಿದ್ದರು. ಸದ್ಯ ಇವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅಸ್ಸಾಂನ ಇಡೀ ಪೊಲೀಸರು ಸಂತಾಪ ವ್ಯಕ್ತಪಡಿಸಿವೆ.

Related Articles

Latest Articles