ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗಿದೆ. ದೇಗುಲ ಸಾರ್ವಜನಿಕರಿಗೆ ತೆರೆದುಕೊಂಡಾಗಿನಿಂದಲೂ ಲಕ್ಷಾಂತರ ಭಕ್ತರು ದಿನವೂ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ ಮೂರ್ತಿ ಕೆತ್ತನೆ ವೇಳೆ ನಡೆದ ಕೆಲ ವಿಸ್ಮಯಗಳನ್ನು ನೆನಪು ಮಾಡಿಕೊಂಡಿದ್ದಾರೆ ಶಿಲ್ಪಿ, ಕನ್ನಡಿಗ ಮೈಸೂರಿನ ಅರುಣ್ ಯೋಗಿರಾಜ್.
ತಾವರೆಯ ಮೇಲೆ ನಿಂತಿರುವ ಐದು ವರ್ಷದ ಮಗುವಿನ ಪ್ರಾಯದ ರಾಮನ ಮೂರ್ತಿಯ ಕೆತ್ತನೆ ವೇಳೆ ದಿನವೂ ಕೆತ್ತನೆ ಮಾಡುತ್ತಿದ್ದ ಸ್ಥಳಕ್ಕೆ ಕೋತಿಯೊಂದು ಬಂದು ರಾಮನ ಮೂರ್ತಿಯನ್ನು ನೋಡಿಕೊಂಡು ಹೋಗುತ್ತಿತ್ತಂತೆ , ಪ್ರತಿದಿನವೂ ಮೂರ್ತಿ ಕೆತ್ತನೆ ಸ್ಥಳಕ್ಕೆ ಹನುಮ ಬಂದು ರಾಮನ ಮೂರ್ತಿಯ ಕೆತ್ತನೆ ಕಾರ್ಯವನ್ನು ನೋಡಿಕೊಂಡು ಹೋಗುತ್ತಿದ್ದ ಎಂದು ಅರುಣ್ ಯೋಗಿರಾಜ್ ಹೇಳಿದ್ದಾರೆ. ಬಹುಶಃ ಹನುಮನಿಗೂ ಮೂರ್ತಿಯನ್ನು ನೋಡಬೇಕು ಎನಿಸುತ್ತಿತ್ತೋ ಏನೋ ಅದು ಪ್ರತಿದಿನವೂ ತಾನು ಕೆತ್ತನೆ ಮಾಡುತ್ತಿದ್ದ ಮೂರ್ತಿಯ ಬಳಿ ಬಂದು ಹೋಗುತ್ತಿತ್ತು. ಪ್ರತಿದಿನ ಸಂಜೆ 4 ರಿಂದ 5 ಗಂಟೆ ಸುಮಾರಿಗೆ ಕೋತಿಯೊಂದು ರಾಮಲಲ್ಲಾ ನ ಮೂರ್ತಿಯನ್ನು ನೋಡಲು ಆಗಮಿಸುತ್ತಿತ್ತು. ನಾವು ಮೂರ್ತಿಗೆ ಕರ್ಟನ್ ಹಾಕುತ್ತಿದ್ದೆವು. ಆದರೂ ಈ ಕೋತಿ ರಾಮಲಲ್ಲಾನ ದರ್ಶನ ಪಡೆಯಲು ಬರುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಅರುಣ್ ಯೋಗಿರಾಜ್ ನಿರ್ಮಿಸಿದ 51 ಇಂಚಿನ ವಿಗ್ರಹವನ್ನು ಮೂರು ಶತಕೋಟಿ ವರ್ಷಗಳಷ್ಟು ಹಳೆಯದಾದ ಬಂಡೆಯಿಂದ ಕೆತ್ತಲಾಗಿದೆ. ಮೈಸೂರಿನ ಎಚ್‌ಡಿ ಕೋಟೆ ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರದಿಂದ ಕೃಷ್ಣ ಶಿಲೆಯನ್ನು (ಕಪ್ಪು ಶಿಲೆ) ಉತ್ಖನನ ಮಾಡಲಾಗಿತ್ತು. ರಾಮದಾಸ್ (78) ಎಂಬುವವರ ಕೃಷಿ ಭೂಮಿಯನ್ನು ಸಮತಟ್ಟು ಮಾಡುವ ವೇಳೆ ಕೃಷ್ಣ ಶಿಲೆ ಪತ್ತೆಯಾಗಿದ್ದು, ಕಲ್ಲಿನ ಗುಣಮಟ್ಟವನ್ನು ಪರಿಶೀಲಿಸಿದ ಸ್ಥಳೀಯ ಗುತ್ತಿಗೆದಾರರೊಬ್ಬರು ತಮ್ಮ ಸಂಪರ್ಕಗಳ ಮೂಲಕ ಅಯೋಧ್ಯೆಯಲ್ಲಿರುವ ದೇವಸ್ಥಾನದ ಟ್ರಸ್ಟಿಗಳ ಗಮನ ಸೆಳೆದಿದ್ದರು.