ಬಿಜೆಪಿ v/s ಪುತ್ತಿಲ ಪರಿವಾರ ಈಗ ಕ್ಲೈಮ್ಯಾಕ್ಸ್ ಕಂಡಿದೆ. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮತ್ತೆ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿವಾಸದಲ್ಲಿ ಗುರುವಾರ ರಾತ್ರಿ ನಡೆದ ಸಭೆಯಲ್ಲಿ ಹಸುರು ನಿಶಾನೆ ಸಿಕ್ಕಿದೆ.
ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪ್ರಮುಖ ನಾಯಕರೊಂದಿಗೆ ಪುತ್ತಿಲ ಸಮಾಲೋಚಿಸಿದರು. ಬಳಿಕ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿವಾಸಕ್ಕೆ ಆಗಮಿಸಿದ ಪುತ್ತಿಲರನ್ನು ಆತ್ಮೀಯವಾಗಿ ಬರಮಾಡಿಕೊಂಡ ವಿಜಯೇಂದ್ರ ಕೆಲ ಹೊತ್ತು ಚರ್ಚೆ ನಡೆಸಿದರು. ಬಳಿಕ ಕೈಗೊಂಡ ತೀರ್ಮಾನದಂತೆ ಪುತ್ತಿಲ ಅವರು ಮಂಗಳೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಪುತ್ತೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಪುತ್ತಿಲ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರಲ್ಲದೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷೇತರರಾಗಿ ಸ್ಪರ್ಧಿಸಿ 62,458 ಮತ ಗಳಿಸಿದ್ದರು. ಇಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಇಲ್ಲಿ ಕಾಂಗ್ರೆಸ್ ಗೆಲುವಿನ ಗೆರೆ ದಾಟಿತ್ತು.
ದೇ ರೀತಿ ಈ ಬಾರಿ ನಳಿನ್ ಕುಮಾರರಿಗೆ ಟಿಕೆಟ್ ಕೊಟ್ಟರೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯುವ ಎಚ್ಚರಿಕೆ ಕೊಟ್ಟಿದ್ದರು. ಈಗ ಕ್ಯಾ.ಬ್ರಜೇಶ್ ಚೌಟರಿಗೆ ಟಿಕೆಟ್ ಘೋಷಿಸಿದ್ದು, ಇದರ ಬೆನ್ನಲ್ಲೇ ಪುತ್ತಿಲ ಸೇರ್ಪಡೆಗೆ ಬಿಜೆಪಿ ವಲಯದಲ್ಲಿ ಹಸಿರು ನಿಶಾನೆ ದೊರೆತಿದೆ. ಈ ಮೂಲಕ ಪುತ್ತೂರಿನಲ್ಲಿನ ಬಿಜೆಪಿ ಬಣ ತಿಕ್ಕಾಟ ಕೊನೆಗೊಳ್ಳಲಿದೆಯಾ? ಅಥವಾ ಪುತ್ತಿಲ ಪರಿವಾರ ಹಾಗೇಯೇ ಮುಂದುವರಿಯುತ್ತಾ ಅನ್ನುವುದನ್ನು ಕಾದುನೋಡಬೇಕಷ್ಟೆ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿ ಪ್ರಚಾರ ಆರಂಭಿಸಿದ್ದು, ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ಒಂದಾಗಿರುವುದು ಪುತ್ತೂರು ಭಾಗದಲ್ಲಿ ಮಾತ್ರವಲ್ಲದೆ ದಕ್ಷಿಣಕನ್ನಡದಲ್ಲಿ ಪಕ್ಷಕ್ಕೆ ಧೈರ್ಯ ಹೆಚ್ಚಿಸಿದೆ. ಆ ಮೂಲಕ ಕಮಲ ಅರಳು ಅರುಣೋದಯವಾಗಿದೆ.