ಬಿಜೆಪಿ ಮತ್ತು ಪುತ್ತಿಲ ಪರಿವಾರ ಸಂಘಟನೆಯ ನಡುವಿನ ಸಂಧಾನ ಫಲಪ್ರದ ಆಗದೇ ಇರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನಕುಮಾರ್ ಮಾರ್ತ ತಿಳಿಸಿದರು.
ಗುರುವಾರ ಪುತ್ತೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದಿನ ಎಲ್ಲ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಜಿಲ್ಲೆಯಲ್ಲಿ ಸ್ಪರ್ಧಿಸುತ್ತದೆ. ಮಾತೃಪಕ್ಷವಾದ ಬಿಜೆಪಿ ಜತೆ ಪುತ್ತಿಲ ಪರಿವಾರ ವಿಲೀನ ಮಾಡಲು ನಮ್ಮದು ಅಭ್ಯಂತರ ಇರಲಿಲ್ಲ. ಕಾರ್ಯಕರ್ತರ ಭಾವನೆಗೆ ಬೆಲೆಕೊಟ್ಟು ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಷರತ್ತು ವಿಧಿಸಿದ್ದೆವು. ಈ ಸಂಬಂಧ ಪುತ್ತೂರಿನಲ್ಲಿ ನಡೆದ ಪುತ್ತಿಲ ಪರಿವಾರದ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿಗೆ ಮೂರು ದಿನಗಳ ಗಡುವು ನೀಡಿ, ನಿರ್ಧಾರ ತಿಳಿಸಬೇಕು ಎಂದು ಆಗ್ರಹಿಸಿದ್ದೆವು. ನಂತರ ಅನೇಕ ಬಾರಿ ಸಂಧಾನ ಮಾತುಕತೆ ನಡೆದಿದ್ದರೂ ಫಲ ದೊರೆತಿಲ್ಲ’ ಎಂದರು.
ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ. ಬಿ.ಎಲ್. ಸಂತೋಷ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಜತೆ ಮಾತುಕತೆ ನಡೆಸಲಾಗಿದೆ. ಎಲ್ಲರಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದರೂ ಈವರೆಗೆ ಅವರು ಯಾವ ನಿರ್ಧಾರ ಕೈಗೊಂಡಿಲ್ಲ. ಬೇಡಿಕೆಗೆ ಸ್ಪಂದಿಸಲು ಮಾತೃಪಕ್ಷ ವಿಫಲವಾಗಿರುವುದರಿಂದ ಕಾರ್ಯಕರ್ತರ ಒತ್ತಾಸೆಯಂತೆ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಲಿದ್ದಾರೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವದ ವಿರುದ್ಧ ಸ್ಪರ್ಧಿಸಿದ್ದರೂ ಮೋದಿಗೆ ಬೆಂಬಲ ಎಂಬ ಘೋಷವಾಕ್ಯ ಇತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದರೆ ಅದು ಮೋದಿ ವಿರುದ್ಧದ ಸ್ಪರ್ಧೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೋದಿ ವಿರುದ್ಧ ಎಂಬ ಪ್ರಶ್ನೆಯೇ ಬರುವುದಿಲ್ಲ. ನಾವು ಹಿಂದುತ್ವದ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಬಿಜೆಪಿ ಜತೆ ಸೇರಲು ಪಕ್ಷದೊಂದಿಗೆ ಸಂಧಾನ ಮಾಡಿದ್ದೆವು’ ಎಂದರು.
’10 ತಿಂಗಳುಗಳಿಂದ ಬಿಜೆಪಿ ನಾಯಕರ ಜೊತೆ ಅನೇಕ ಬಾರಿ ಸಂಧಾನಕ್ಕೆ ಹೋಗಿದ್ದೆವು. ಇನ್ನು ನಾವಾಗಿ ಬಿಜೆಪಿ ನಾಯಕರ ಬಳಿಗೆ ಸಂಧಾನದ ವೀಳ್ಯ ಹಿಡಿದುಕೊಂಡು ಹೋಗುವುದಿಲ್ಲ. ಅವರಾಗಿಯೇ ಬಂದರೆ ಮಾತ್ರ ಸಂಧಾನ ಮಾಡಲಾಗುವುದು’ ರಾಜಾರಾಮ ಭಟ್ ಹೇಳಿದರು.
ಪುತ್ತಿಲ ಪರಿವಾರದ ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ಉಪಾಧ್ಯಕ್ಷ ಮಹೇಂದ್ರ ವರ್ಮ, ನಗರ ಘಟಕದ ಅಧ್ಯಕ್ಷ ಅನಿಲ್ ತೆಂಕಿಲ ಇದ್ದರು.