Monday, December 9, 2024

ಅಡಿಕೆ ಸಿಪ್ಪೆಯಲ್ಲಿದೆ ಅಗಾಧ ಶಕ್ತಿ..! ಕೃಷಿಯಲ್ಲಿ ಬಳಸುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ತೆಂಗಿನಮರವನ್ನು ಕಲ್ಪವೃಕ್ಷ ಅನ್ನುತ್ತೇವೆ. ಅದನ್ನು ಹೊರತಾಗಿ ಈಗ ಅಡಿಕೆ ಮರವನ್ನು ಕಲ್ಪವೃಕ್ಷ ಅನ್ನಬಹುದು. ಅಡಿಕೆ ಮರದ ಪ್ರತಿಯೊಂದು ಭಾಗವೂ ಉಪಯೋಗಿಸುವ ಕಾರಣ ಇದನ್ನೂ ಕಲ್ಪ ವೃಕ್ಷ ಎಂದು ಕರೆಯುತ್ತಾರೆ. ಅಡಿಕೆಗೆ ಅತ್ಯುತ್ತಮ ಬೆಲೆಯಿದ್ದು ಅಡಿಕೆ ಸಿಪ್ಪೆಯ ಪ್ರಯೋಜನ ಏನು ಗೊತ್ತಾ? ವಿವಿಧ ಕೃಷಿಗಳಲ್ಲಿ ಅಡಿಕೆ ಸಿಪ್ಪೆಯನ್ನು ಭೂಮಿಗೆ ಸೇರಿಸುವುದರಿಂದ ಇಷ್ಟೆಲ್ಲಾ ಪ್ರಯೋಜನ ಇದೆ ಎಂದರೆ ಅಚ್ಚರಿ ಪಡುತ್ತೀರಿ‌.

ಒಣಗಿದ ಸಿಪ್ಪೆ ಉಪಯೋಗಗಳ ಬಗ್ಗೆ ಬಹುತೇಕ ಬೆಳೆಗಾರರು ಯೋಚಿಸುತ್ತಿಲ್ಲ. ಈ ಒಣಗಿದ ಸಿಪ್ಪೆಯಲ್ಲಿ ಮಣ್ಣಿಗೆ ಮರುರೂಪ ಕೊಡುವಂತಹ ಇಂಗಾಲವಿದೆ‌. ಈ ಇಂಗಾಲಾಂಶದಿಂದ ಮಣ್ಣು ಚೇತನಗೊಳ್ಳುತ್ತದೆ.

ಮಣ್ಣಲ್ಲಿ ಬೆರೆತ ಅಡಿಕೆ ಸಿಪ್ಪೆಯಿಂದ ಇಂಗಾಲಾಂಶ ಪಡೆದುಕೊಳ್ಳುವ ಮಣ್ಣು ತನ್ನಲ್ಲಿನ ಮರಳು ಗೋಡು ಜೇಡಿ ಕಣಗಳನ್ನು – ಸಂಯೋಜಿಸಿಕೊಳ್ಳುತ್ತವೆ. ಇದರಿಂದ ಮಣ್ಣಲ್ಲಿ ಫಲವತ್ತತೆ ಹೆಚ್ಚಾಗುತ್ತದೆ.

ಈ ಮಣ್ಣಲ್ಲಿ ಬೆಳೆಯುವ ಬೆಳೆಗಳು ಆರೋಗ್ಯವಾಗಿ ಇರುತ್ತವೆ. ಬೀಳುವ ಮಳೆನೀರಿನ ಹನಿಹನಿಯೂ ಹೊರಹೋಗದೆ ಮಣ್ಣಲ್ಲೇ ಇಂಗುತ್ತವೆ. ನೀರು ಇಂಗಿದ ಪರಿಣಾಮ ಮಣ್ಣು ತಂಪಾಗಿರುತ್ತದೆ.

ತಂಪು ಮಣ್ಣಲ್ಲಿ ಬಹುಬಗೆಯ ಮಣ್ಣು ಜೀವಿಕಣಗಳು ಸೃಷ್ಟಿಯಾಗುತ್ತವೆ. ಈ ಜೀವಿಗಳು ಬರಡು ಮಣ್ಣಿಗೆ ಸಜೀವಿ ತುಂಬುತ್ತದೆ.

ಒಣಗಿದ ಸಿಪ್ಪೆಯಲ್ಲಿ ಮ್ಯಾಂಗನೀಸ್ ಅಂಶವಿದ್ದು, ಅದರಿಂದ ದ್ಯುತಿಸಂಶ್ಲೇಷಣೆ ಸರಾಗವಾಗಿ ಆಗುತ್ತದೆ. ಆ ಮಣ್ಣಲ್ಲಿ ಬೆಳೆಯುವ ಗಿಡಗಳಿಗೆ ಸಾರಜನಕ ಅಂಶ ಸಹಜವಾಗಿ ಸಿಗುತ್ತದೆ. ಗಿಡದಲ್ಲಿ ಕ್ಲೋರೋಫಿಲ್ ಅಂಶ ಸೃಷ್ಟಿಯಾಗುತ್ತದೆ.

ಒಣಗಿದ ಅಡಿಕೆ ಸಿಪ್ಪೆಯಲ್ಲಿ ಬೊರಾನ್ ಅಂಶವಿರುವುದೆ. ಈ ಅಂಶವಿರುವ ಮಣ್ಣಿನಲ್ಲಿ ಬೆಳೆಯುವ ಗಿಡಗಳ ಬೇರು ಉತ್ತಮವಾಗಿ ಇರುತ್ತದೆ. ಗಿಡದಲ್ಲಿ ಮೂಡುವ ಮೊಗ್ಗು, ಹೂವು, ಕಾಯಿ, ಧಾನ್ಯ, ಕಾಳು, ತೆನೆ, ಹಣ್ಣು ಇನ್ನಿತರ ಫಲಗಳ ಉದುರುವಿಕೆ ನಿಲ್ಲುತ್ತದೆ.

ಗಿಡದಲ್ಲಿ ಉತ್ಪನ್ನವಾಗುವ ಫಲಗಳನ್ನು ಹೊರುವ ಧಾರಣಾ ಶಕ್ತಿ ಹೆಚ್ಚಾಗುತ್ತದೆ. ಗಿಡಗಳು ಸದಾಕಾಲ ಹಸಿರಾಗಿಯೂ, ದೃಢವಾಗಿಯೂ ಹಾಗೂ ಆರೋಗ್ಯವಾಗಿಯೂ ಇದ್ದು, ಇಳುವರಿಯ ಪ್ರಮಾಣ ಹೆಚ್ಚಾಗುತ್ತದೆ.

ಒಣಗಿದ ಅಡಿಕೆ ಸಿಪ್ಪೆಯಲ್ಲಿ ಕಬ್ಬಿಣದ ಅಂಶವೂ ಸೇರಿದ್ದು, ಇದನ್ನು ಹೊಂದಿರುವ ಮಣ್ಣಿನ ಬಣ್ಣ ದಟ್ಟವಾಗಿರುತ್ತದೆ. ಮಣ್ಣಲ್ಲಿ ಆಮ್ಲಜನಕ ಸೃಷ್ಟಿಯಾಗುತ್ತದೆ. ಗಿಡವು ದೃಢವಾಗಿ ನಿಲ್ಲುತ್ತವೆ. ಬಲಿಷ್ಠವಾಗಿ ಬೆಳೆಯುತ್ತದೆ. ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿರುತ್ತದೆ. ಏರುಪೇರಿನ ಹವಾಮಾನದಲ್ಲೂ ಒತ್ತಡದಲ್ಲಿ ಬೆಳೆಯುವ ಗಿಡಗಳಿಗೆ ಮಣ್ಣಲಿನ ಕಬ್ಬಿಣದ ಅಂಶ ರಕ್ಷಾಕವಚವಾಗಿ ಇರುತ್ತದೆ.

ಇನ್ನು ಒಣಗಿದ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಅಂಶವೂ ಕೂಡ ಇದೆ. ಇದರಿಂದ ಬೇರುಗಳು ಉತ್ತಮವಾಗಿ ಬೆಳೆಯುತ್ತವೆ. ಗಿಡಕ್ಕೆ ಅಧಿಕ ಭಾರ ಹೊರುವ ಸಾಮರ್ಥ್ಯ ಸಿಗುತ್ತದೆ. ಗಿಡದ ಎತ್ತರ, ಗಾತ್ರ ಸಮತೋಲನೆಯಲ್ಲಿರುತ್ತದೆ. ಗಿಡದಲ್ಲಿ ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ ಹಾಗೂ ಮಣ್ಣಿಗೆ ನೀರನ್ನು ಇಂಗಿಸಿಕೊಳ್ಳುವ ಸಾಮರ್ಥ್ಯ ದೊರೆಯುತ್ತದೆ.

Related Articles

Latest Articles