ಅಂಕೋಲಾ: ಬೈಕ್ ಓಡಿಸುತ್ತಿದ್ದಾಗ ನಾಯಿಯೊಂದು ಅಡ್ಡ ಬಂದ ಹಿನ್ನಲೆ ಅದನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾದ ಘಟನೆ ಮೇ 8 ರಂದು ನಡೆದಿತ್ತು. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಚಾಲಕ ಮೃತಪಟ್ಟಿದ್ದಾರೆ.
ಅಂಕೋಲಾ ಪಟ್ಟಣದ ಅಜ್ಜಿಕಟ್ಟಾ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಹೊನ್ನಿಕೇರಿ ನಿವಾಸಿ ನವೀನ ಆನಂದ ನಾಯ್ಕ (33) ಮೃತ ದುರ್ದೈವಿ. ವೆಂಕಟರಮಣ ದೇವಸ್ಥಾನದ ರಥಬೀದಿಯ ಬಳಿ ಗ್ಯಾರೇಜ್ ಒಂದನ್ನು ನಡೆಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಈತ ಮೇ 8 ರಂದು ರಾತ್ರಿ 11.35 ರ ಸುಮಾರಿಗೆ ಬೈಕ್ ಮೇಲೆ ಕಾರವಾರ ಕಡೆಯಿಂದ ಅಂಕೋಲಾ ಪಟ್ಟಣದ ಕಡೆ ಬರುತ್ತಿದ್ದಾಗ ಅಜ್ಜಿಕಟ್ಟಾ ಕ್ರಿಸ್ತ ಮಿತ್ರ ಆಶ್ರಮದ ಎದುರು ಅಚಾನಕ್ ಆಗಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿದ್ದಾರೆ.
ಈ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಬೇಳಾ ಬಂದರಿನ ನಿವಾಸಿ ಕರಣ ದೇವಿದಾಸ ನಾಯ್ಕ ಎನ್ನುವವರು ಸಹ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.
ಗಾಯಗೊಂಡ ಬೈಕ್ ಸವಾರ ನವೀನ ಆನಂದ ನಾಯ್ಕನಿಗೆ, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅಲ್ಲಿಂದ ಕಾರವಾರ ಕ್ರಿಮ್ಸ್ ಗೆ ಸಾಗಿಸಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕಳೆ ದಿನಗಳಿಂದ ಮಂಗಳೂರಿನಲ್ಲಿ ಚಿಕಿತ್ಸೆಗೊಳಪಟ್ಟಿದ್ದ ಗಾಯಾಳು ನವೀನ ನಾಯ್ಕ, ಚಿಕಿತ್ಸೆಗೆ ಸ್ಪಂದಿಸದೇ ಮೇ 16 ರಂದು ಮೃತ ಪಟ್ಟಿದ್ದಾಗಿ ಸುದ್ದಿ ಮೂಲಗಳು ತಿಳಿಸಿದೆ.