ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಅವರು ನಿಧನರಾಗಿದ್ದಾರೆ. ಕ್ಯಾನ್ಸರ್ನಿಂದ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ ಕೂಡ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ನಮ್ಮ ಮೆಟ್ರೋ ಅನೌನ್ಸ್ಮೆಂಟ್ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.
ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಿಸಿದರು. ನಂತರ ಭಾರತ ಸರ್ಕಾರದ ‘ವಿವಿಧ ಭಾರತಿ’ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.
ಕಿರುತೆರೆಯಲ್ಲಿ ‘ಮೂಡಲಮನೆ’, ‘ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ನಲ್ಲಿ ಅವರು ಭಾಗವಹಿಸಿದ್ದರು. ಸೃಜನ್ ಲೋಕೇಶ್ ನೇತೃತ್ವದ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಎಂಬ ಪಾತ್ರವನ್ನು ಅಪರ್ಣಾ ಮಾಡಿದ್ದರು.
ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನಲ್ಲಿ ಕೇಳಿಬರುವ ಪ್ರಯಾಣಿಕರ ಸೂಚನೆಗಳಿಗೆ ಅಪರ್ಣಾ ಧ್ವನಿ ನೀಡಿದ್ದರು. ಆ ಮೂಲಕ ಅವರು ಜನರಿಗೆ ಇನ್ನಷ್ಟು ಹತ್ತಿರ ಆಗಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಸಿನಿಮಾ ಮೂಲಕ ಅಪರ್ಣಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅವರು ಕೊನೆಯದಾಗಿ ನಟಿಸಿದ್ದ ‘ಗ್ರೇ ಗೇಮ್ಸ್’ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು.