ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ತಮ್ಮ 21ನೇ ವಯಸ್ಸಿನಲ್ಲಿ ಕಂಚಿನ ಪದಕಕ್ಕೆ ಕೊರೊಳೊಡ್ಡುವ ಮೂಲಕ ಎಂಬುದು ವಿಶೇಷ.
57 ಕೆ.ಜಿ ಫ್ರೀ ಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಅಮನ್ ಸೆಹ್ರಾವತ್ ಹಾಗೂ ಪೋರ್ಟೊ ರಿಕೊದ ಡೇರಿಯನ್ ಟೊಯಿ ಕ್ರೂಜ್ ಮುಖಾಮುಖಿಯಾಗಿದ್ದರು. ಕಂಚಿನ ಪದಕ್ಕಾಗಿ ನಡೆದ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂದರೂ ಅಂತಿಮವಾಗಿ 13-5 ಪಾಯಿಂಟ್ಸ್ಗಳ ಅಂತರದಿಂದ ಗೆಲ್ಲುವಲ್ಲಿ ಅಮನ್ ಯಶಸ್ವಿಯಾದರು.
ಈ ಗೆಲುವಿನೊಂದಿಗೆ ಅಮನ್ ಸೆಹ್ರಾವತ್ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದರು. ವಿಶೇಷ ಎಂದರೆ ಈ ಪದಕದೊಂದಿಗೆ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಪದಕ ಗೆದ್ದುಕೊಟ್ಟ ಅತ್ಯಂತ ಕಿರಿಯ ಕ್ರೀಡಾಳು ಎಂಬ ದಾಖಲೆಯೊಂದು ಅಮನ್ ಹೆಸರಿಗೆ ಸೇರ್ಪಡೆಯಾಯಿತು.
ಪ್ಯಾರಿಸ್ ಒಲಿಂಪಿಕ್ಸ್ ಮೂಲಕ ಚೊಚ್ಚಲ ಬಾರಿಗೆ ಒಲಿಂಪಿಕ್ಸ್ ಅಂಗಳಕ್ಕೆ ಪ್ರವೇಶಿಸಿರುವ ಅಮನ್ ಸೆಹ್ರಾವತ್ 21 ವರ್ಷ, 24 ದಿನಗಳ ವಯಸ್ಸಿನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪರ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಅತ್ಯಂತ ಕಿರಿಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ.