ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 2000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನಿ ವಕ್ತಾರರು ತಿಳಿಸಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇನ್ನೂ ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ವಿಶ್ವಸಂಸ್ಥೆಯು ಆರಂಭದಲ್ಲಿ 320 ಜನರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿತು. ಅದರ ನಂತರ ಸಾವಿನ ಸಂಖ್ಯೆ ಗಣನೀಯ ಏರಿಕೆಯಾಗಿದೆ.
INDIA TODAYS REPORT: https://www.google.com/amp/s/www.indiatoday.in/amp/world/story/afghanistan-earthquake-update-dead-injured-houses-flattened-taliban-help-herat-2446047-2023-10-08
ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಶನಿವಾರ ಬೆಳಿಗ್ಗೆ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ತೀವ್ರತೆ 6.3 ರಷ್ಟಿತ್ತು. ಶನಿವಾರ ಮಧ್ಯಾಹ್ನದ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕನಿಷ್ಠ ಐದು ಪ್ರಬಲ ಭೂಕಂಪಗಳು ಸಂಭವಿಸಿವೆ.
ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಹೆರಾತ್ನ ವಾಯುವ್ಯಕ್ಕೆ 40 ಕಿ.ಮೀ ದೂರದಲ್ಲಿತ್ತು. “ನಾವೆಲ್ಲರೂ ಕಚೇರಿಯಲ್ಲಿ ಕಾರ್ಯನಿರತರಾಗಿದ್ದೆವು. ಇದ್ದಕ್ಕಿದ್ದಂತೆ ಇಡೀ ಕಟ್ಟಡ ನಡುಗಿತು. ಗೋಡೆಗಳು ಬಿರುಕು ಬಿಟ್ಟಿದ್ದರಿಂದ ನಾವು ಭಯದಿಂದ ಓಡಿದೆವು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ದೇಶದ ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದ ವಕ್ತಾರ ಅಬ್ದುಲ್ ವಾಹಿದ್ ರಾಯನ್, ಹೆರಾತ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸುಮಾರು ಆರು ಗ್ರಾಮಗಳು ನಾಶವಾಗಿವೆ ಮತ್ತು ನೂರಾರು ನಾಗರಿಕರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಹೇಳಿ ತುರ್ತು ಸಹಾಯಕ್ಕಾಗಿ ಕರೆ ನೀಡಿದರು.