ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 5 ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಬಲೆಗೆ 8 ಮಂದಿ ಶಂಕಿತ ಆರೋಪಿಗಳು ಬಿದ್ದಿದ್ದಾರೆ. ಬಂಧಿತ 8 ಮಂದಿಯನ್ನು ಅಬ್ದುಲ್ ಸಫ್ವಾನ್, ನಿಯಾಜ್, ಎಂಡಿ ಮುಜಾಮಿಲ್, ಕಲಂದರ್ ಶಫಿ, ಆದಿಲ್ ಮೆಹರೂಫ್, ನಾಗರಾಜ್, ಎಂಡಿ ರಿಜ್ವಾನ್ ಮತ್ತು ರಂಜಿತ್ ಎಂದು ಗುರುತಿಸಲಾಗಿದೆ ಎಂದರು.

ಮಂಗಳೂರಿಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು, ನಾವು ಎರಡೂ ಜಿಲ್ಲೆಗಳಲ್ಲಿ ಕೋಮು ವಿರೋಧಿ ಕಾರ್ಯಪಡೆಯನ್ನು ರಚಿಸುತ್ತಿದ್ದೇವೆ.
ಈ ಕಾರ್ಯಪಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ. ಕೋಮುವಾದವನ್ನು ಬೆಂಬಲಿಸುವ ಅಥವಾ ಉತ್ತೇಜಿಸುವವರ ವಿರುದ್ಧ ಕೋಮು ವಿರೋಧಿ ಕಾರ್ಯಪಡೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು.