Friday, June 27, 2025

ಫಿಡೆ ವಸ್ತ್ರ ಸಂಹಿತೆ ಉಲ್ಲಂಘನೆ: ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಚೆಸ್ ಚಾಂಪಿಯನ್‌ಶಿಪ್‌ನಿಂದ ಅನರ್ಹ

ನ್ಯೂಯಾರ್ಕ್: ಫಿಡೆ ವಸ್ತ್ರಸಂಹಿತೆ ಉಲ್ಲಂಘನೆಗಾಗಿ ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ (Magnus Carlsen) ಅವರಿಗೆ ಮೊದಲು ದಂಡ ವಿಧಿಸಿ, ನಂತರ World Rapid Chess Championshipನಿಂದ ಅನರ್ಹಗೊಳಿಸಲಾಗಿದೆ.

ವಾಲ್‌ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಜೀನ್ಸ್ ಪ್ಯಾಂಟ್ ಧರಿಸಿ ಆಡಲು ಬಂದಿದ್ದ ಹಾಲಿ ಚಾಂಪಿಯನ್ ಕಾರ್ಲ್‌ನ್‌ ಅವರಿಗೆ ಮೊದಲು ಸುಮಾರು ₹17000 ($200) ದಂಡ ವಿಧಿಸಲಾಯಿತು. ಟೂರ್ನಿಯ ವಸ್ತ್ರಸಂಹಿತೆ ನಿಯಮಗಳ ಪ್ರಕಾರ ಆಟಗಾರರು ಜೀನ್ಸ್ ಧರಿಸುವಂತಿಲ್ಲ. ಎಂಟನೇ ಸುತ್ತಿನ ನಂತರ ಪ್ಯಾಂಟ್ ಬದಲಾಯಿಸಿ ಬರುವಂತೆ ಅವರಿಗೆ ಚೀಫ್ ಆರ್ಬಿಟರ್ ಅಲೆಕ್ಸ್ ಹೊಲೊವ್ವಾಕ್ ಅವರು ವಿನಂತಿಸಿದ್ದರು. ಆದರೆ ಅದಕ್ಕೆ ಮ್ಯಾಗ್ನಸ್ ನಿರಾಕರಿಸಿದ ಕಾರಣ ಅನರ್ಹಗೊಳಿಸಲಾಯಿತು.

ಒಂಬತ್ತನೇ ಸುತ್ತಿನ ಪೇರಿಂಗ್ (ಆಟಗಾರರ ಮುಖಾಮುಖಿ) ವೇಳೆ ಅವರ ಹೆಸರನ್ನು ಸೇರ್ಪಡೆಗೊಳಿಸಲಿಲ್ಲ. ಅವರು ಕಳೆದ ಎರಡು ವರ್ಷಗಳಿಂದ ಈ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾಗಿದ್ದಾರೆ.

ಮರುದಿನದಿಂದ ವಸ್ತ್ರಸಂಹಿತೆ ಪಾಲನೆ ಮಾಡಲು ಒಪ್ಪುವುದಾಗಿ ಚೆಸ್‌ ಲೋಕದ ದಿಗ್ಗಜ ಆಟಗಾರ ಕಾರ್ಲ್‌ನ್‌ ತಿಳಿಸಿದರು. ಆದರೆ ತಕ್ಷಣಕ್ಕೆ ಬದಲಾಯಿಸಲು ಒಪ್ಪಲಿಲ್ಲ. ಹೀಗಾಗಿ ಅವರನ್ನು ಅನರ್ಹಗೊಳಿಸಲಾಯಿತು.

ವೃತ್ತಿಪರತೆ ಕಾಪಾಡುವ ದೃಷ್ಟಿಯಿಂದ ಭಾಗವಹಿಸುವ ಎಲ್ಲ ಆಟಗಾರರಿಗೆ ವಸ್ತ್ರಸಂಹಿತೆ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ವಿಶ್ವ ಚೆಸ್‌ ಸಂಸ್ಥೆಯಾದ ಫಿಡೆ ತಿಳಿಸಿದೆ.

Related Articles

Latest Articles