ಮಡಿಕೇರಿ: ಸೈಬರ್ ವಂಚಕರ ಜಾಲದ ಬೆನ್ನತ್ತಿದ ಮಲಪ್ಪುರಂ ಪೊಲೀಸರು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ದೆಹಲಿ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿಸಿದಾಗ ಈತನಿಂದ ಸ್ಪೋಟಕ ಅಂಶ ಬಯಲಾಗಿದೆ. ಆತನಿಂದ ಬರೋಬ್ಬರಿ 40 ಸಾವಿರ ಸಿಮ್ ಕಾರ್ಡ್ ಮತ್ತು 180 ಮೊಬೈಲ್, ೬ ಬಯೋಮೆಟ್ರಿಕ್ ಸ್ಕ್ಯಾನರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ದೆಹಲಿ ಮೂಲದ ಅಬ್ದುಲ್ ರೋಷನ್ (46) ಬಂಧಿತ ವ್ಯಕ್ತಿ. ಮಲಪ್ಪುರಂ ಜಿಲ್ಲೆಯ ವ್ಯಕ್ತಿಯೊಬ್ಬರು 1.8 ಕೋಟಿ ವಂಚನೆಯಾದ ಬಗ್ಗೆ ದೂರು ದಾಖಲು ಮಾಡಿದ್ದರು. ಫೇಸ್ಟುಕ್ ನಲ್ಲಿ ಸ್ಟಾಕ್ ಮಾರ್ಕೆಟ್ ಹೂಡಿಕೆ ಬಗ್ಗೆ ತಿಳಿದು ಅದರಲ್ಲಿದ್ದ ಲಿಂಕ್ ಮೇಲೆ ಒತ್ತಿದ ಆ ವ್ಯಕ್ತಿ, ವಂಚಕರ ಸೂಚನೆಯಂತೆ ಸ್ಟಾಕ್ ಮಾರ್ಕೆಟ್ ಏಪ್ ಡೌನ್ಹೋಡ್ ಮಾಡಿ 1.8 ಕೋಟಿ ಹೂಡಿಕೆ ಮಾಡಿದ್ದರು. ಆದರೆ ಹಣವನ್ನು ಹಿಂಪಡೆಯುವುದು ಸಾಧ್ಯವಾಗದೆ ಮೋಸಗೊಂಡಿದ್ದನ್ನು ತಿಳಿದು ಪೊಲೀಸ್ ದೂರು ನೀಡಿದ್ದರು.
ಆಸ್ಟೈಲ್ ಸ್ಟಾಕ್ ಮಾರ್ಕೆಟ್ ವೆಬ್ ಸೈಟ್ ಹೆಸರಲ್ಲಿ ಗ್ಯಾಂಗ್ ಒಂದು ಸಕ್ರಿಯವಾಗಿರುವುದನ್ನು ಪತ್ತೆ ಮಾಡಿದ ಮಲಪ್ಪುರಂ ಪೊಲೀಸರು ವಂಚಕರು ಉಪಯೋಗಿಸುತ್ತಿದ್ದ ಸಿಮ್ ಕಾರ್ಡ್ ಬೆನ್ನತ್ತಿ ಕಾರ್ಯಾಚರಣೆ ನಡೆಸಿದ್ದರು. ಮಡಿಕೇರಿಯಲ್ಲಿ ನೆಲೆಸಿದ್ದ ಅಬ್ದುಲ್ ರೋಷನ್, ಬೇರೆ ಬೇರೆ ಟೆಲಿಫೋನ್ ಕಂಪನಿಗಳ ಹೆಸರಲ್ಲಿ ನಕಲಿ ಸಿಮ್ ಕಾರ್ಡ್ ಗಳನ್ನು ಮಾಡಿಸಿ ಸೈಬರ್ ವಂಚಕರಿಗೆ ಪೂರೈಸುತ್ತಿದ್ದುದನ್ನು ಪತ್ತೆ ಮಾಡಿದ್ದಾರೆ.
ಅಬ್ದುಲ್ ರೋಷನ್ ಮಡಿಕೇರಿಯಲ್ಲಿದ್ದು ಟೆಲಿಫೋನ್ ಕಂಪನಿಯೊಂದರ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಇದರ ಜೊತೆಗೆ ನಕಲಿ ಸಿಮ್ ಗಳನ್ನು ತಯಾರಿಸಿ, ಸೈಬರ್ ವಂಚಕರಿಗೆ ಪೂರೈಸುವ ಕೆಲಸ ಮಾಡುತ್ತಿದ್ದ. ಸೈಬರ್ ವಂಚಕರು ಈ ಸಿಮ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಖಾತೆಗಳನ್ನ ತೆರೆಯಲು ಬಳಸುತ್ತಿದ್ದರು. ಸಿಮ್ ಮೂಲಕ ಓಟಿಪಿ ಪಡೆಯುವುದು ಬಿಟ್ಟರೆ ಬೇರ ಉದ್ದೇಶಕ್ಕೆ ಬಳಸುತ್ತಿರಲಿಲ್ಲ. ಅಬ್ದುಲ್ ರೋಷನ್ ಮಡಿಕೇರಿಯಲ್ಲಿ ಮೊಬೈಲ್ ಅಂಗಡಿ ಹೊಂದಿದ್ದು, ಅಲ್ಲಿಗೆ ಬರುತ್ತಿದ್ದ ಗ್ರಾಹಕರ ಬೆರಳಚ್ಚು ಪಡೆದು ಅವರಿಗೆ ತಿಳಿಯದಂತೆ ಸಿಮ್ ಕಾರ್ಡ್ ಗಳನ್ನು ಚಾಲ್ತಿಗೊಳಿಸುತ್ತಿದ್ದ. ಆ ಸಿಮ್ ಕಾರ್ಡ್ ಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದ ಎಂಬ ಸ್ಪೋಟಕ ಅಂಶ ಬಹಿರಂಗವಾಗಿದೆ.
ನಕಲಿ ಸಿಮ್ ಕಾರ್ಡ್ ಮಾರಾಟದ ಅತಿ ದೊಡ್ಡ ಜಾಲ ಈ ಮೂಲಕ ಬೆಳಕಿಗೆ ಬಂದಿದ್ದು ನಾವಿನ್ನೂ ಸೈಬರ್ ವಂಚಕರ ಜಾಲವನ್ನು ತಿಳಿದುಕೊಂಡಿಲ್ಲ. ಅಬ್ದುಲ್ ರೋಷನ್ ಮೂಲಕ ಕೆಲವು ಮಾಹಿತಿಗಳನ್ನು ಪಡೆದಿದ್ದು ತನಿಖೆ ಮುಂದುವರಿಸುತ್ತೇವೆ. ಸೈಬರ್ ವಂಚನೆ ಜಾಲದಲ್ಲಿ ದೇಶದ ಹಲವಾರು ಕಡೆಯಲ್ಲಿ ನೆಟ್ವರ್ಕ್ ಇದ್ದು ಹಲವು ಮಂದಿ ದೇಶ ಮತ್ತು ವಿದೇಶದಲ್ಲಿದ್ದು ಸಕ್ರಿಯರಾಗಿದ್ದಾರೆ ಎಂದು ಮಲಪ್ಪುರಂ ಎಸ್ಪಿ ಶಶಿಧರನ್ ಹೇಳಿದ್ದಾರೆ. ಸೈಬರ್ ವಂಚನೆ ಜಾಲದ ಬಗ್ಗೆ ಮಲಪ್ಪುರಂ ಎಸ್ಪಿ, ಡಿಸಿಆರ್ ಬಿ ಡಿವೈಎಸ್ಪಿ ವಿ.ಎಸ್.ಶೈಜು ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಮಾರ್ಚ್ 10ರಂದು ಮಲಪ್ಪುರಂ ಜಿಲ್ಲೆಯ ವೆಂಗರ ನಿವಾಸಿ 1.8 ಕೋಟಿ ವಂಚನೆಯಾದ ಬಗ್ಗೆ ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.