ಕಾರನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಓಡಿಸಿದ್ದಕ್ಕಾಗಿ ಬಾಲಕನ ತಂದೆಗೆ ಶಿವಮೊಗ್ಗದ 3ನೇ ಎಸಿಜೆ ಹಾಗೂ ಜೆಎಂಎಫ್ ಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ.
ಸೆ.9 ರಂದು ಶಿವಮೊಗ್ಗ ನಗರದಲ್ಲಿ ಮಾರುತಿ ಒಮ್ನಿಯನ್ನು ಇಲಿಯಾಸ್ ಎಂಬುವರ 17 ವರ್ಷದ ಮಗ ಓಡಿಸಿದ್ದಾನೆ. ಕರ್ನಾಟಕ ಸಂಘದ ಸಮೀಪದ ಬಿಎಚ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರ ಕಣ್ಣಿಗೆ ಈ ಕಾರು ಬಿದ್ದಿದೆ. ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಆಗ, ಬಾಲಕ ಡ್ರೈವಿಂಗ್ ಲೈಸೆನ್ಸ್ ಇಲ್ಲದೆಯೇ ಒಮ್ಮಿ ಕಾರನ್ನು ಚಲಾಯಿಸಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆ, ಶಿವಮೊಗ್ಗ ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಡ್ರೈವಿಂಗ್ ಮಾಡಲು ಅರ್ಹತೆ ಇಲ್ಲದಿದ್ದರೂ ಮಗನಿಗೆ ಮಾರುತಿ ಒಮ್ನಿ ನೀಡಿದ್ದ ತಂದೆ ಇಲಿಯಾಸ್ ವಿರುದ್ಧ ಪೊಲೀಸರು, ಶಿವಮೊಗ್ಗ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾಗಿದ್ದು, ನ್ಯಾಯಾಧೀಶರು, ದಂಡ ವಿಧಿಸಿದ್ದಾರೆ. ಚಿಕ್ಕಮಗಳೂರಿನ ಎನ್.ಆರ್.ಪುರದ ನಿವಾಸಿ ಇಲಿಯಾಸ್ ದಂಡ ಕಟ್ಟುವ ವ್ಯಕ್ತಿಯಾಗಿದ್ದಾರೆ.