ಬೆಂಗಳೂರು: ಹೆಚ್ಚಿನ ಸಂಬಳದ ಉದ್ಯೋಗ ನೀಡುವ ಭರವಸೆ ನೀಡಿ ಅಭ್ಯರ್ಥಿಗಳಿಂದಲೇ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದ ಪವನ್ ಕುಮಾರ್(36) ಬಂಧಿತ ಆರೋಪಿ.
18 ಮಂದಿಗೆ ₹25 ಲಕ್ಷ ವಂಚಿಸಿದ ಕುರಿತು ದೂರು ದಾಖಲಾಗಿದ್ದು, ಪವನ್ ಕುಮಾರ್ ಸೇರಿದಂತೆ 6 ಮಂದಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ‘ಆರೋಪಿ ಪವನ್ ಸೇರಿದಂತೆ ಹಲವರು ಕೆಲಸ ಕೊಡಿಸುವ ನೆಪದಲ್ಲಿ ನೂರಾರು ಮಂದಿಗೆ ₹20 ಕೋಟಿ ವಂಚಿಸಿರುವ ಮಾಹಿತಿ ಇದೆ. ಈ ಕುರಿತು ತನಿಖೆ ಮುಂದುವರಿಸಲಾಗಿದೆ. ದಾಖಲೆ ಸಂಗ್ರಹಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ನವೋದ್ಯಮ ಸ್ಥಾಪಿಸಿದ್ದ ಆರೋಪಿ
ಆರು ವರ್ಷಗಳ ಹಿಂದೆ ವಿಶಾಖಪಟ್ಟಣದಿಂದ ನಗರಕ್ಕೆ ಬಂದಿದ್ದ ಆರೋಪಿ, ವೈಟ್‌ಫೀಲ್ಡ್ ಸಿಮಾಖ್ ಟೆಕ್ನಾಲಜಿ ಆ್ಯಂಡ್ ಮಾಂಟಿ ಕಾರ್ಪೊರೇಷನ್ ಎಂಬ ನವೋದ್ಯಮ ಕಂಪನಿ ತೆರೆದಿದ್ದ. ಈ ಕಂಪನಿಯಲ್ಲಿ ಉದ್ಯೋಗ ಹುಡುಕುವ ಯುವಕ- ಯುವತಿಯರಿಗೆ ಸಾಫ್ಟ್‌ವೇರ್ ಅಭಿವೃದ್ಧಿ ಕುರಿತು ತರಬೇತಿ ನೀಡುತ್ತೇವೆ. ಅಲ್ಲದೇ ಬೇರೆ ಕಂಪನಿಗಳಲ್ಲಿ ಕೆಲಸ ನೀಡುವುದಾಗಿ ನಂಬಿಸಿ ಪ್ರತಿ ಅಭ್ಯರ್ಥಿಯಿಂದ ₹ 1ರಿಂದ ₹ 2 ಲಕ್ಷದ ವರೆಗೆ ಪಡೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.
“ಆರಂಭದಲ್ಲಿ ಅಭ್ಯರ್ಥಿಗಳಿಗೆ ಹಲವು ಸೌಲಭ್ಯ ನೀಡಿದ್ದ. ವಾರ್ಷಿಕವಾಗಿ ದೊಡ್ಡ ಮೊತ್ತದ ಪ್ಯಾಕೇಜ್ ಕೊಡುವುದಾಗಿ ಘೋಷಿಸಿದ್ದ. ಕೆಲವರಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿದ್ದ. ಎರಡು ತಿಂಗಳ ಬಳಿಕ ಕಂಪನಿಗೆ ಬೀಗ ಹಾಕಿ, ಪರಾರಿಯಾಗಿದ್ದ. ನಂತರ, ಆತಂಕಗೊಂಡ ಅಭ್ಯರ್ಥಿಗಳು ಕೆಲಸಕ್ಕೆ ಸೇರಿಕೊಳ್ಳಲು ಮತ್ತೆ 30 ಮಂದಿ ಬಂದಿದ್ದಾರೆ. ಹಣ ಕೊಡಲು ಸಿದ್ಧವಾಗಿದ್ದಾರೆ ಎಂದು ತಿಳಿಸಿದ್ದರು. ವಿಮಾನದ ಮೂಲಕ ಬಂದಿದ್ದ ಆರೋಪಿ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ. ಅಲ್ಲಿಗೆ ಬಂದ ಪೊಲೀಸರು ಬಂಧಿಸಿದ್ದಾರೆ’